"ಸರಿಯಾಗಲಿಲ್ಲವದು ಸರಿಯಿದಲ್ಲವೆನುತಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ
ಕೊರೆಯಾದೊಡೇನೊಂದು ನೆರೆದೊಡೇನಿನ್ನೊಂದು
ಒರಟು ಕೆಲಸವೊ ಬದುಕು ಮಂಕುತಿಮ್ಮ"
"ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ
ಮೀನು ನೀರೊಳು ನುಸುಳೆ ಪಥನಿಯಮವಹುದೆ
ಏನೊ ಜೀವವನೆಳೆವುದೇನೊ ನೂಕುವುದದನು
ನೀನೊಂದು ಗಾಳಿಪಟ ಮಂಕುತಿಮ್ಮ "
"ಎಡವದೆಯೆ ಮೈಗಾಯವಡೆಯದೆಯೆ ಮಗುವಾರು
ನಡೆಯ ಕಲಿತವನು ಮತಿನೀತಿಗತಿಯಂತು
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ
ದಡವಿಕೊಳುವವರೆಲ್ಲ ಮಂಕುತಿಮ್ಮ"
"ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ
ನಿನ್ನನಳಿಸುವ ನಗಿಸುವೆಲ್ಲ ನಿನ್ನಂಶ
ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ
ಸಣ್ಣತನ ಸವೆಯುವುದು ಮಂಕುತಿಮ್ಮ "
ಹೀಗೆ ೯೪೫ ಅರ್ಥಪೂರ್ಣ ಕಗ್ಗಗಳಿವೆ. ಶ್ರೀ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (ಡಿ.ವಿ.ಜಿ)ರವರ ಮಂಕು ತಿಮ್ಮನ ಕಗ್ಗದ ಬಗ್ಗೆ ಯಾರಿಗೆ ತಾನೆ ತಿಳಿಯದು. ಶ್ರೀ ಡಿ ವಿ ಜಿ ಯವರು ಬಹುಮುಖ ಪ್ರಜ್ಜ್ನ್ಯೆಯ ಬರಹಗಾರರೇ ಸರಿ. ಜೀವನದ ಕ್ಲಿಷ್ಟತೆಗಳನ್ನು ಅತಿ ಸರಳವಾಗಿ, ಸುಂದರ ಪ್ರಾಸಬದ್ದ ಪದಗಳಲ್ಲಿ ಅಲಂಕರಿಸಲ್ಪಟ್ಟ ಅವರ ಕವನ ಸಂಗ್ರಹವೇ 'ಮಂಕು ತಿಮ್ಮನ ಕಗ್ಗ'. ಇದರಲ್ಲಿ ಹಲವಾರು ನೈತಿಕ ವಿವೇಚನೆಗಳನ್ನು ವಿಸ್ತರಿಸಿದ್ದರೂ, ಅರ್ಥ ಪೂರ್ಣ ಸಿದ್ಧಾಂತಗಳನ್ನು ಭಾವುಕವಾಗಿ ಡಿವಿಜಿಯವರು ನಾಲ್ಕು ಸಾಲಿನ ಕಗ್ಗದ ರೂಪದಲ್ಲಿ ಈ ಮಹಾಸಂಕಲನವನ್ನೇ ರಚಿಸಿದ್ದಾರೆ. ಈ ಜಟಿಲ ಪ್ರಪಂಚದಲ್ಲಿ, ವಾಸ್ತವಿಕತೆಯು ಸರಿಯೇ? ಅಥವಾ ಆದರ್ಶವಾದವು ಉಚಿತವೇ? ಈ ಎರಡೂ ಅಂಶಗಳನ್ನು ಅಳವಡಿಸಿ ಕೊಂಡು ಮಧ್ಯದಾರಿಯಲ್ಲಿ ನಡೆಯ ಬೇಕೆಂಬ ನೀತಿಯನ್ನು ಈ ಕಗ್ಗದಲ್ಲಿ ಕಾಣಬಹುದು..
ಈ ಸಂಕಲನವನ್ನು ಇಲ್ಲಿ ಕೇಳಿ ಆನಂದಿಸಿರಿ - ರಾಗ ಮ್ಯೂಸಿಕ್ ಸೈಟ್ .
ಮಂಕು ತಿಮ್ಮನ ಕಗ್ಗ'ದ ಬಗ್ಗೆ ಹೆಚ್ಚಿನ ಓದುಗೆಗೆ ಈ ಸೈಟ್ ಅನ್ನು ಬೇಟಿ ನೀಡಿ.